6 ಬಾರಿ ಸಂಸದರಾಗಿ, 2 ಬಾರಿ ಶಾಸಕರಾಗಿ, 7 ಪ್ರಧಾನಿಗಳನ್ನು ಕಂಡ ವಿ.ಶ್ರೀನಿವಾಸಪ್ರಸಾದ್!!

V. Srinivas Prasad: ವಿ.ಶ್ರೀನಿವಾಸಪ್ರಸಾದ್ ಒಟ್ಟು 14 ಚುನಾವಣೆಗಳನ್ನು ಎದುರಿಸಿದ್ದು 8 ಚುನಾವಣೆಗಳಲ್ಲಿ ಗೆದ್ದಿದ್ದಾರೆ. 6 ಬಾರಿ ಸಂಸದರಾಗಿ 2 ಬಾರಿ ಶಾಸಕರಾಗಿದ್ದ ಪ್ರಸಾದ್ 7 ಪ್ರಧಾನಿಗಳನ್ನು ಕಂಡಿದ್ದಾರೆ.

Written by - Yashaswini V | Last Updated : Apr 29, 2024, 10:24 AM IST
  • ಪಕ್ಷೇತರ ಅಭ್ಯರ್ಥಿಯಾಗಿ ಪ್ರಸಾದ್ ಕಣಕ್ಕೆ ಇಳಿಯುವ ಮೂಲಕ ರಾಜಕೀಯ ಪ್ರವೇಶ ಮಾಡಿದರು
  • ಕಾಂಗ್ರೆಸ್ ಎಷ್ಟೇ ಒತ್ತಡ ತಂದರೂ ಸ್ಪರ್ಧೆಯಿಂದ ಹಿಂದೆ ಸರಿಯದೇ ಪೈಪೋಟಿ ನೀಡಿ 4 ನೇ ಸ್ಥಾನವನ್ನು ಆ ಚುನಾವಣೆಯಲ್ಲಿ ಪಡೆದರು. ‌
6 ಬಾರಿ ಸಂಸದರಾಗಿ, 2 ಬಾರಿ ಶಾಸಕರಾಗಿ, 7 ಪ್ರಧಾನಿಗಳನ್ನು ಕಂಡ ವಿ.ಶ್ರೀನಿವಾಸಪ್ರಸಾದ್!! title=

ಚಾಮರಾಜನಗರ:  ಹೌದು..., 1974 ರಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಡಿ.ಸತ್ಯನಾರಾಯಣ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಎಐಡಿಎಂಕೆ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಪ್ರಸಾದ್ ಕಣಕ್ಕೆ ಇಳಿಯುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಕಾಂಗ್ರೆಸ್ ಎಷ್ಟೇ ಒತ್ತಡ ತಂದರೂ ಸ್ಪರ್ಧೆಯಿಂದ ಹಿಂದೆ ಸರಿಯದೇ ಪೈಪೋಟಿ ನೀಡಿ 4 ನೇ ಸ್ಥಾನವನ್ನು ಆ ಚುನಾವಣೆಯಲ್ಲಿ ಪಡೆದರು. ‌ಇವರು ಒಡ್ಡಿದ್ದ ಸ್ಪರ್ಧೆ ರಾಜಕೀಯ ಧುರುಣರ ಗಮನ ಸೆಳೆದು ಕೊನೆಗೇ 1974 ರಲ್ಲಿ ಸಂಸ್ಥಾ ಕಾಂಗ್ರೆಸ್ ಸೇರಿ ಯುವ ಕಾಂಗ್ರೆಸ್ ನ‌ ಪ್ರಧಾನ‌ ಕಾರ್ಯದರ್ಶಿಯಾಗಿ ಹುರುಪಿನಿಂದ ಸಂಘಟನೆ ಮಾಡಿ ಗಮನ ಸೆಳೆದರು.

ತುರ್ತು ಪರಿಸ್ಥಿತಿ ಬಳಿಕ ಜಯಪ್ರಕಾಶ್ ಕರೆ ನೀಡಿದಂತೆ ವಿಪಕ್ಷಗಳು  ಸೇರಿ ಒಂದು ಪಕ್ಷ- ಒಂದು ಧ್ವಜ ರಚಿಸಿಕೊಂಡು ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿತು.

1977 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಲೋಕದಳ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿ.ರಾಚಯ್ಯ ವಿರುದ್ಧ ಪರಾಭವಗೊಂಡರು. 1978 ರಲ್ಲಿ ಟಿ.ನರಸಿಪುರ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ, ಇಂದಿರಾ ಕಾಂಗ್ರೆಸ್ ನ ಅಭ್ಯರ್ಥಿ 28,061 ಮತಗಳನ್ನು ಪಡೆದ ಪಿ.ವೆಂಕಟರಮಣ ಗೆದ್ದರೇ ಶ್ರೀನಿವಾಸಪ್ರಸಾದ್  20,034 ಪಡೆದು  ಮೂರನೇ ಚುನಾವಣೆಯಲ್ಲೂ ಪರಾಭವಗೊಂಡರು.

1980 ರ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಶ್ರೀನಿವಾಸ ಪ್ರಸಾದ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದು ಬಿ.ರಾಚಯ್ಯ ವಿರುದ್ಧ ಗೆದ್ದು ಮೊದಲ ಬಾರಿ ಸಂಸತ್ ಸದಸ್ಯರಾದರು. ಆ ಚುನಾವಣೆಯಲ್ಲಿ ಪ್ರಸಾದ್ 2,28,748 ಮತಗಳನ್ನು ಪಡೆದರೇ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್-ಯು ನ ಬಿ‌.ರಾಚಯ್ಯ ಅವರಿಗೆ 1,18,287,  ಜನತಾ ಪಕ್ಷದ ಸಿದ್ದಯ್ಯಗೆ 36 ಸಾವಿರ ಮತಗಳು ಬಂದಿದ್ದವು‌‌. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಠೇವಣಿ ಹಣವನ್ನು ತಾಯಿ ಕೊಟ್ಟು ಶುಭ ಹಾರೈಸಿದ್ದರು ಎಂದು ತಮ್ಮ ಸ್ವಾಭಿಮಾನಿಯ ನೆನಪುಗಳು ಎಂಬ ತಮ್ಮ ಜೀವನಗಾಥೆಯಲ್ಲಿ ಪ್ರಸಾದ್ ದಾಖಲಿಸಿದ್ದಾರೆ‌. ಮೊದಲ ಬಾರಿ 1980 ರಲ್ಲಿ ಸಂಸದರಾದ ಬಳಿಕ ಪ್ರಸಾದ್ 1984, 1989, 1991 ಹೀಗೆ ಸತತ  ನಾಲ್ಕು ಚುನಾವಣೆಗಳಲ್ಲಿ ಜಯಗಳಿಸಿದರು.

ಇದನ್ನೂ ಓದಿ-ಮುಸ್ಲಿಮರ ಕೊಲೆಯಾದರೆ ಸಿಎಂ ಟೀಮ್ ಜಿಗಿದು ಬರ್ತಿದ್ರು

1984 ರಲ್ಲಿ ಜನತಾಪಕ್ಷದ ಮಲ್ಲೇಶಯ್ಯ, 1989 ರಲ್ಲಿ ಜನತಾದಳದ ದೇವನೂರು ಶಿವಮಲ್ಲು 1991 ರಲ್ಲಿ  ಜನತಾದಳದ ಡಾ.ಎಚ್.ಸಿ.ಮಹಾದೇವಪ್ಪ ಅವರನ್ನು ಶ್ರೀನಿವಾಸಪ್ರಸಾದ್ ಸೋಲಿಸಿದ್ದರು.

1996 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಟಿಕೆಟ್ ಸಿಗದೇ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡರು. ಸಂಯುಕ್ತರಂಗ ಸರ್ಕಾರಗಳು ಉರುಳಿದ್ದರಿಂದ 1998 ರಲ್ಲಿ ಮತ್ತೇ ಚುನಾವಣೆ ಎದುರಾಗಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದರು.‌ಆದರೆ, ಎರಡನೇ ಬಾರಿ ಎ.ಸಿದ್ದರಾಜು ಜನತಾದಳದಿಂದ ಆಯ್ಕೆಯಾದರು.

ಎಐಡಿಎಂಕೆ ಜಯಲಲಿತಾ ತಮ್ಮ ಬೆಂಬಲ ವಾಪಾಸ್ ಪಡೆದಿದ್ದರಿಂದ 1999 ರಲ್ಲಿ ಲೋಕಸಭಾ ಚುನಾವಣೆ ಮತ್ತೊಮ್ಮೆ ಎದುರಾಯಿತು. ಆ ಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್ ಜೆಡಿಯುನಿಂದ ಸ್ಪರ್ಧೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಸಿದ್ದರಾಜು ಅವರನ್ನು ಸೋಲಿಸಿದರು.

ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆ , ಜಾರ್ಜ್ ಫರ್ನಾಂಡೀಸ್ ಅವರಿಂದಾಗಿ ಶ್ರೀನಿವಾಸ ಪ್ರಸಾದ್ ಅವರಿಗೆ ಕೇಂದ್ರ ಮಂತ್ರಿ ಸ್ಥಾನ ಒಲಿಯಿತು. ಬಳಿಕ, ಜಾರ್ಜ್ ಫರ್ನಾಂಡೀಸ್ ಅವರೊಂದಿಗೆ ಗುರುತಿಸಿಕೊಂಡು ಸಮತಾ ಪಾರ್ಟಿ ಸೇರಿ 2004 ರ ಚುನಾವಣೆ ವೇಳೆಗೆ ಜೆಡಿಎಸ್ ಸೇರಿ ತಮ್ಮ ಬೆಂಬಲಿಗರಾದ ಕಾಗಲವಾಡಿ ಶಿವಣ್ಣಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡರು. ಅದಾದ ಬಳಿಕ, ಮತ್ತೇ ಕಾಂಗ್ರೆಸ್ ನತ್ತ ವಾಲಿದ್ದ ಪ್ರಸಾದ 2008 ರಲ್ಲಿ ನಂಜನಗೂಡು ಕ್ಷೇತ್ರದಿಂದ ಗೆದ್ದು ಮೊದಲ ಬಾರಿ ಶಾಸಕರಾದರು. ಬಳಿಕ, 2013 ರಲ್ಲೂ ನಂಜನಗೂಡು ಕ್ಷೇತ್ರದಿಂದ ಆಯ್ಕೆಯಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು. ಸಚಿವ ಸಂಪುಟ ಪುನಾರಚನೆ ಹೊತ್ತಲ್ಲಿ ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ನಿಂದ ಹೊರಬಂದರು. ಬಳಿಕ, ಬಿಜೆಪಿ ಸೇರಿ ನಂಜನಗೂಡು ಉಪ ಚುನಾವಣೆಯಲ್ಲಿ ಪರಭಾವಗೊಂಡರು. 

2019 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಮುಖಂಡರು, ಅಭಿಮಾನಿಗಳ ಒತ್ತಡಕ್ಕೆ ಮಣಿದು ಸ್ಪರ್ಧಿಸಿ ಮೊದಲ ಬಾರಿಗೆ ಚಾಮರಾಜನಗರದಲ್ಲಿ ಕಮಲ ಅರಳಿಸಿದ್ದರು. 

7 ಪ್ರಧಾನಿಗಳನ್ನು ಕಂಡ ಪ್ರಸಾದ್ : 
27 ವರ್ಷಗಳ ಸಂಸತ್ ಸದಸ್ಯರಾಗಿದ್ದ ವೇಳೆ ವಿ.ಶ್ರೀನಿವಾಸಪ್ರಸಾದ್ ಅವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ವಿ.ಪಿ.ಸಿಂಗ್, ಚಂದ್ರಶೇಖರ್, ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಕಂಡಿದ್ದರು. ಉತ್ತಮ ಸಂಸದೀಯಪಟುವಾಗಿದ್ದ ಪ್ರಸಾದ್ ಎಲ್ಲಾ ಚರ್ಚೆಗಳಲ್ಲೂ ಭಾಗಿಯಾಗುತ್ತಿದ್ದರು, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸಂಸತ್ ನಲ್ಲಿ ನಿರರ್ಗಳವಾಗಿ ಮಂಡಿಸುತ್ತಿದ್ದರು.

ನಾನು ಪಕ್ಷಾಂತರಿ ಆದರೆ ತತ್ವಾಂತರಿ ಅಲ್ಲ: 
ದಲಿತ ನಾಯರಾಗಿದ್ದ, ತುಳಿತಕ್ಕೆ ಒಳಗಾದ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದ, ನೇರ-ನಿಷ್ಠುರವಾದಿಯಾಗಿದ್ದ ಪ್ರಸಾದ್ ಅವರು ಸಾಕಷ್ಟು ಬಾರಿ " ನಾನು ಹಲವಾರು ಪಕ್ಷಗಳನ್ನು ಬದಲಿಸಿರಬಹುದು ಆದರೆ ತತ್ವ ಬಿಟ್ಟಿಲ್ಲ, ನಾನು ಪಕ್ಷಾಂತರಿ ಆಗಿರಬಹುದು ಆದರೆ ತತ್ವಾಂತರಿಯಾಗಿಲ್ಲ, ಸ್ವಾಭಿಮಾನ ಬಿಟ್ಟಿಲ್ಲ ಎನ್ನುತ್ತಿದ್ದರು.‌ ಅದರಂತೆ, ನಡೆದುಕೊಂಡರು ಕೂಡ.  ರಾಜಕೀಯ ಜೀವನದಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ ಬಂಡಾಯವೆದ್ದಿದ್ದಾರೆ , ಪಕ್ಷ ಯಾವುದೇ ಇರಲಿ, ನಾಯಕ ಯಾರೇ ಇರಲಿ ಅವರನ್ನು ಬಿಟ್ಟು ಹೊರನಡೆದಿದ್ದು ಸ್ವಾಭಿಮಾನಿ ರಾಜಕಾರಣಿ ಎಂಥಲೇ ಕರೆಯಿಸಿಕೊಂಡಿದ್ದಾರೆ.

ಇದನ್ನೂ ಓದಿ-"ಭಾರತೀಯರನ್ನು ಪದೇ ಪದೇ ಮೂರ್ಖರನ್ನಾಗಿಸಲು ಪ್ರಧಾನಿ ಮೋದಿ ಅವರಿಂದ ಸಾಧ್ಯವಿಲ್ಲ"

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News