ಪ್ರಧಾನಿ ಮೋದಿ, ಅಮಿತ್ ಶಾ ಕರ್ನಾಟಕ & ನಾಡಿನ ರೈತರನ್ನು ದ್ವೇಷಿಸುತ್ತಾರೆ: ಸಿಎಂ ಸಿದ್ದರಾಮಯ್ಯ

LokSabha Elections 2024: ಪ್ರಧಾನಿ ಮೋದಿಯವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ. ಪ್ರವಾಹ, ಭೀಕರ ಬರಗಾಲದಲ್ಲಿ ಬರಲಿಲ್ಲ. ಕರ್ನಾಟಕದ ಮತದಾರರನ್ನು ಮತ ಕೇಳಲು ಬರುತ್ತಿದ್ದಾರೆ ಅದಕ್ಕಾಗಿ #GoBackModi, #GoBackAmitShah ಎಂದು ಹೇಳುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Written by - Puttaraj K Alur | Last Updated : Apr 23, 2024, 08:18 PM IST
  • ಪ್ರಧಾನಿ ಮೋದಿಯವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ
  • ಪ್ರವಾಹ, ಭೀಕರ ಬರಗಾಲದಲ್ಲಿ ಬರಲಿಲ್ಲ, ಕರ್ನಾಟಕದ ಮತದಾರರನ್ನು ಮತ ಕೇಳಲು ಬರುತ್ತಿದ್ದಾರೆ
  • ಅದಕ್ಕಾಗಿ #GoBackModi, #GoBackAmitShah ಎಂದು ಹೇಳುತ್ತಿದ್ದೇವೆಂದ ಸಿದ್ದರಾಮಯ್ಯ
ಪ್ರಧಾನಿ ಮೋದಿ, ಅಮಿತ್ ಶಾ ಕರ್ನಾಟಕ & ನಾಡಿನ ರೈತರನ್ನು ದ್ವೇಷಿಸುತ್ತಾರೆ: ಸಿಎಂ ಸಿದ್ದರಾಮಯ್ಯ  title=
ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ!

ಬೆಂಗಳೂರು: ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕರ್ನಾಟಕವನ್ನು ಹಾಗೂ ನಾಡಿನ ರೈತರನ್ನು  ದ್ವೇಷಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ಬರ ಪರಿಹಾರದಲ್ಲಿ ತಾರತಮ್ಯವನ್ನು ವಿರೋಧಿಸಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಎದುರು ಹಮ್ಮಿಕೊಂಡಿದ್ದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ʼಕರ್ನಾಟಕಕ್ಕೆ ನ್ಯಾಯ ಕೊಡಿ ಎಂದು ಕೇಳಿದ್ದರೂ, ಇಂದಿನವರೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಅದಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡು ರಾಜ್ಯ ಹಾಗೂ ದೇಶದ ಜನರ ಗಮನವನ್ನು ಸೆಳೆಯುವ ಪ್ರಯತ್ನ ಮಾಡಿದ್ದೇವೆʼ ಎಂದು ಹೇಳಿದ್ದಾರೆ. 

ಸೆಪ್ಟೆಂಬರ್ 22 ರಂದು ಬರಪರಿಹಾರ ಕೋರಿ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದು, ಕೇಂದ್ರ ತಂಡ 4 ದಿನಗಳ ಕಾಲ ಪರಿಶೀಲನೆ ಮಾಡಿ ಕೇಂದ್ರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ಈ ಮಧ್ಯೆ ಸಚಿವ ಕೃಷ್ಣ ಬೈರೇಗೌಡ ಹಾಗೂ ಪ್ರಿಯಾಂಕ್ ಖರ್ಗೆ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಕರ್ನಾಟಕ ಎದುರಿಸುತ್ತಿರುವ ಬರಗಾಲದ ಬಗ್ಗೆ ವಿವರಿಸಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದು, 240 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಣೆ ಮಾಡಿದ್ದೇವೆ. 100 ವರ್ಷಗಳ ನಂತರ ಇಂತಹ ಬರಗಾಲ ಎದುರಾಗಿದೆ. ಮನವಿ ಕೊಟ್ಟಿದ್ದರೂ ಕೂಡ ಅಮಿತ್‌ ಶಾ ಚನ್ನಪಟ್ಟಣಕ್ಕೆ ಬಂದಿದ್ದ ಸಂದರ್ಭದಲ್ಲಿ ಮನವಿಯನ್ನು ವಿಳಂಬವಾಗಿ ಸಲ್ಲಿಸಿದ್ದಾರೆಂದು ಸುಳ್ಳು ಹೇಳಿದ್ದರುʼ ಎಂದು ಕುಟುಕಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗ್ಯಾರಂಟಿ ಯೋಜನೆಗಳಿಗೆ ಹಣ ಕೇಳುತ್ತಿದ್ದಾರೆ, ಬರಗಾಲಕ್ಕೆ ಅಲ್ಲವೆಂದು ಸುಳ್ಳು ಹೇಳಿದ್ದಾರೆ. ನಾವು ಗ್ಯಾರಂಟಿಗಳಿಗೆ ಒಂದೇ ಒಂದು ಪೈಸೆಯನ್ನೂ ಕೇಂದ್ರ ಬಿಜೆಪಿ ಸರ್ಕಾರದಿಂದ ಕೇಳಿಲ್ಲ. ನಮಗೆ ಬೇಕಾಗಿಯೂ ಇಲ್ಲ. ಗ್ಯಾರಂಟಿ ಯೋಜನೆಗೆ ಬೇಕಾದಷ್ಟು ಹಣವನ್ನು ನಮ್ಮ ಸಂಪನ್ಮೂಲದಿಂದಲೇ ಭರಿಸಿದ್ದೇವೆ. 36,000 ಕೋಟಿ ರೂ.ಗಳನ್ನು ಕಳೆದ ವರ್ಷ ಹಾಗೂ 52,009 ಕೋಟಿ ರೂ.ಗಳನ್ನು ಮುಂದಿನ ಸಾಲಿಗೆ ಮೀಸಲಿರಿಸಿದ್ದೇವೆ. ಬರಗಾಲಕ್ಕೆ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಳೆ ಇಲ್ಲದೇ ಬೆಳೆ ನಷ್ಟವಾಗಿದೆ. ರೈತರು ಕಷ್ಟದಲ್ಲಿದ್ದಾರೆ. ನಮ್ಮ ಸರ್ಕಾರ 2,000 ರೂ.ಗಳವರೆಗೆ 34 ಲಕ್ಷ ರೈತರಿಗೆ ನೀಡಲಾಗಿದೆ. 650 ಕೋಟಿ ರೂ.ಗಳನ್ನು ಇದಕ್ಕಾಗಿ ವೆಚ್ಚ ಮಾಡಲಾಗಿದೆ. ಬರಗಾಲವನ್ನು ಈವರೆಗೆ ಸಮರ್ಥವಾಗಿ ಎದುರಿಸಿದ್ದೇವೆ. ಕುಡಿಯುವ ನೀರು, ಮೇವು, ಜನರಿಗೆ ಕೆಲಸ, ಗುಳೇ ಹೋಗುವುದನ್ನು ತಪ್ಪಿಸುವುದು, ರೈತರಿಗೆ ಮೊದಲ ಕಂತಿನ ಪರಿಹಾರ ನೀಡುವುದನ್ನು ಮಾಡಿದ್ದೇವೆʼ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಇದನ್ನೂ ಓದಿ: Lok Sabha Election 2024: "ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ ಎನ್ನುವುದು ಸಾಬೀತಾಗಿದೆ"

18,172 ಕೋಟಿ ರೂ. ಬರಪರಿಹಾರವನ್ನು NDRFನಿಂದ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರಕ್ಕೆ ಒತ್ತಾಯ ಮಾಡಿದ್ದೇವೆ. ಇದನ್ನು ನೀಡಿ 7 ತಿಂಗಳಾಗಿವೆ. ನಾನೇ ಸ್ವತಃ ಪ್ರಧಾನಮಂತ್ರಿಗಳನ್ನು ಭೇಟಿಯಾಗಿದ್ದೇನೆ. ಸಂಬಂಧಪಟ್ಟವರಿಗೆ ತಿಳಿಸಿ ಕೂಡಲೇ ಬಿಡುಗಡೆ ಮಾಡುವಂತೆ ತಿಳಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ನಂತರ ನಾನು ಮತ್ತು ಕೃಷ್ಣ ಬೈರೇಗೌಡ ಡಿಸೆಂಬರ್ 20ರಂದು ಅಮಿತ್‌ ಶಾರನ್ನು ಭೇಟಿ ಮಾಡಿದಾಗ ಡಿಸೆಂಬರ್ 23ಕ್ಕೆ ಸಭೆ ಕರೆದು ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿ ಈವರೆಗೆ ಏನೂ ಮಾಡಿಲ್ಲ. ಮೋದಿ ಮತ್ತು ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಾರೆ. ರಾಜ್ಯಕ್ಕೆ ಮೇಲಿನಿಂದ ಮೇಲೆ ಬರಲು ಯಾವುದೇ ನೈತಿಕತೆ ಇಲ್ಲʼವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್‌ನಲ್ಲಿಯೇ ಹೇಳಿದರು. ಬಜೆಟ್ ಸಂಸತ್ತಿನಲ್ಲಿ ಅನುಮೋದನೆಯಾಗಿದೆ. ಬಸವರಾಜ್‌ ಬೊಮ್ಮಾಯಿಯವರೂ ಕೂಡ ತಮ್ಮ ಬಜೆಟ್‌ನಲ್ಲಿ ಧನ್ಯವಾದ ಹೇಳಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವುದಾಗಿ ಹೇಳಿ ಇಂದಿನವರೆಗೆ ಈ ಯಾವುದೂ ಆಗಿಲ್ಲ. ಅದರ ಜೊತೆಗೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ₹5,495 ಕೋಟಿ ವಿಶೇಷ ಅನುದಾನವನ್ನು ಕೊಡಲಿಲ್ಲ. ಕೊಡದೇ ಈರಲು ಕಾರಣ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ಮೋದಿಯವರು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

15ನೇ ಹಣಕಾಸು ಆಯೋಗ ಪೆರಿಫೆರಲ್ ರಿಂಗ್‌ರೋಡ್‌ಗೆ ₹3,000 ಕೋಟಿ ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ₹3,000 ಕೋಟಿ ಕೊಡಿ ಎಂದು ಶಿಫಾರಸು ಮಾಡಿದ್ದರೂ ಕೊಡಲಿಲ್ಲ. ಬರಪರಿಹಾರಕ್ಕೂ ಒಂದು ರೂ.ಇಲ್ಲ. ಪ್ರಧಾನಿ ಮೋದಿಯವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ. ಪ್ರವಾಹ, ಭೀಕರ ಬರಗಾಲದಲ್ಲಿ ಬರಲಿಲ್ಲ. ಕರ್ನಾಟಕದ ಮತದಾರರನ್ನು ಮತ ಕೇಳಲು ಬರುತ್ತಿದ್ದಾರೆ ಅದಕ್ಕಾಗಿ #GoBackModi, #GoBackAmitShah ಎಂದು ಹೇಳುತ್ತಿದ್ದೇವೆ. ಅಮಿತ್‌ ಶಾ ಅವರು ಹೈಪವರ್ ಕಮಿಟಿ ಸಭೆ ನಡೆಸಿ ₹18,171 ಕೋಟಿ ಕೊಟ್ಟು ಆಮೇಲೆ ರಾಜ್ಯಕ್ಕೆ ಬರಲಿʼ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

ಇದನ್ನೂ ಓದಿ: Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ!

ರಾಜ್ಯ ಸರ್ಕಾರ ಅನಿವಾರ್ಯವಾಗಿ ಸುಪ್ರೀಂಕೋರ್ಟ್ ಕದ ತಟ್ಟಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದವರು ಕೇಂದ್ರ ಬಿಜೆಪಿ ಸರ್ಕಾರದವರು. ಅಲ್ಲಿ ಅಟಾರ್ನಿ ಜನರಲ್ ಅವರು ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಅವರು ಹೇಳಿದ ಸುಳ್ಳಿನ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ತೆರಿಗೆ ಅನ್ಯಾಯದ ಬಗ್ಗೆ ರಾಜ್ಯ ಸರ್ಕಾರ ಸೂಕ್ತವಾದ ಹಾಗೂ ಸತ್ಯಾಂಶವನ್ನು ಮಂಡಿಸಿದ್ದರಿಂದ ಕರ್ನಾಟಕದ ಮೇಲೆ ಕರುಣೆ ತೋರಿತು. ಸರ್ವೋಚ್ಚ ನ್ಯಾಯಾಲಯ ನಮ್ಮ ಪರವಾಗಿ ಕರುಣೆ ತೋರಿದೆ. ಒಂದು ವೇಳೆ ನಾವು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗದೇ ಇದ್ದರೆ ಒಂದು ರೂ. ಪರಿಹಾರ ನೀಡುತ್ತಿರಲಿಲ್ಲʼವೆಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News