Sunita Williams : ಜಗತ್ತುಗಳ ನಡುವೆ ಸೇತುವೆ ನಿರ್ಮಿಸಿ, ನಕ್ಷತ್ರಗಳೆಡೆಗೆ ಭಾರತೀಯ ಅಮೆರಿಕನ್ ಗಗನಯಾತ್ರಿಯ ಪಯಣ

Sunita williams achievements : ಸುನೀತಾ ವಿಲಿಯಮ್ಸ್ ಮೊತ್ತಮೊದಲ ಬಾರಿಗೆ ಡಿಸೆಂಬರ್ 9, 2006ರಂದು ಡಿಸ್ಕವರಿ ಸ್ಪೇಸ್ ಶಟಲ್ ಮೂಲಕ, ಎಸ್‌ಟಿಎಸ್-116 ಯೋಜನೆಯ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಅವರು 14 ಹಾಗೂ 15 ಯೋಜನೆಗಳ ಅಂಗವಾಗಿ ಅಲ್ಲಿ ಉಳಿದುಕೊಂಡು, ನಾಲ್ಕು ಬಾಹ್ಯಾಕಾಶ ನಡಿಗೆಯನ್ನು ಪೂರೈಸಿದರು. 

Written by - Girish Linganna | Edited by - Krishna N K | Last Updated : Sep 19, 2023, 05:28 PM IST
  • ಸುನೀತಾ ವಿಲಿಯಮ್ಸ್ ಅಮೆರಿಕಾದ ಗಗನಯಾತ್ರಿ ಹಾಗೂ ನೌಕಾದಳದ ಅಧಿಕಾರಿ
  • ಎರಡು ಬಾರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಇತಿಹಾಸ ನಿರ್ಮಿಸಿದ್ದಾರೆ.
  • ಅವರ ಜನ್ಮದಿನದ ಸಂದರ್ಭದಲ್ಲಿ, ಅವರ ಜೀವನ ಮತ್ತು ಸಾಧನೆಗಳ ಕುರಿತು ಗಮನಿಸೋಣ.
Sunita Williams : ಜಗತ್ತುಗಳ ನಡುವೆ ಸೇತುವೆ ನಿರ್ಮಿಸಿ, ನಕ್ಷತ್ರಗಳೆಡೆಗೆ ಭಾರತೀಯ ಅಮೆರಿಕನ್ ಗಗನಯಾತ್ರಿಯ ಪಯಣ title=

Sunita Williams life history : ಸುನೀತಾ ವಿಲಿಯಮ್ಸ್ ಅವರು ಅಮೆರಿಕಾದ ಗಗನಯಾತ್ರಿ ಹಾಗೂ ನೌಕಾದಳದ ಅಧಿಕಾರಿಯಾಗಿದ್ದು, ಎರಡು ಬಾರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್ಎಸ್) ತೆರಳಿ, ಅಲ್ಲಿ ಕಾರ್ಯಾಚರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಭಾರತೀಯ ಮತ್ತು ಸ್ಲೋವೆನಿಯನ್ ಮೂಲದವರಾಗಿದ್ದು, ಬಾಹ್ಯಾಕಾಶಕ್ಕೆ ತೆರಳಿದ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳ ರಾಷ್ಟ್ರಧ್ವಜ ಮತ್ತು ಆಹಾರಗಳನ್ನು ಬಾಹ್ಯಾಕಾಶಕ್ಕೆ ಒಯ್ದು, ತನ್ನ ವೈವಿಧ್ಯಮಯ ಹಿನ್ನೆಲೆಯನ್ನು ಸಾರಿದ್ದರು. ಅವರ ಜನ್ಮದಿನದ ಸಂದರ್ಭದಲ್ಲಿ, ಅವರ ಜೀವನ ಮತ್ತು ಸಾಧನೆಗಳ ಕುರಿತು ಗಮನಿಸೋಣ.

ಸುನೀತಾ ವಿಲಿಯಮ್ಸ್ ಅವರು ಸೆಪ್ಟೆಂಬರ್ 19, 1965ರಂದು ಅಮೆರಿಕಾದ ಯೂಕ್ಲಿಡ್, ಓಹಿಯೋದಲ್ಲಿ ಭಾರತೀಯ ಅಮೆರಿಕನ್ ನರರೋಗಶಾಸ್ತ್ರಜ್ಞ ದೀಪಕ್ ಪಾಂಡ್ಯಾ ಹಾಗೂ ಸ್ಲಾವೀನ್ ಅಮೆರಿಕನ್ ನರ್ಸ್ ಆಗಿದ್ದ ಉರ್ಸುಲಿನ್ ಬಾನೀ ಪಾಂಡ್ಯಾ ಅವರ ಮಗಳಾಗಿ ಜನಿಸಿದರು. ತನ್ನ ತಂದೆ ತಾಯಿಯ ಮೂವರು ಮಕ್ಕಳಲ್ಲಿ ಕಿರಿಯವರಾದ ಸುನೀತಾ ವಿಲಿಯಮ್ಸ್ ನೀಧಮ್, ಮಸಾಚುಸೆಟ್ಸ್ ನಲ್ಲಿ ಬೆಳೆದರು. ಅವರು 1983ರಲ್ಲಿ ನೀಧಮ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಪೂರ್ಣಗೊಳಿಸಿ, ಅನಾಪೊಲಿಸ್, ಮೇರಿಲ್ಯಾಂಡ್‌ನ ಯುಎಸ್ ನೇವಲ್ ಅಕಾಡೆಮಿಗೆ ಸೇರ್ಪಡೆಯಾದರು. ಅಲ್ಲಿ ಅವರು 1987ರಲ್ಲಿ ಭೌತಿಕ ವಿಜ್ಞಾನದಲ್ಲಿ ಪದವಿ ಪಡೆದರು. ಅವರು 1995ರಲ್ಲಿ ಫ್ಲೋರಿಡಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಇದನ್ನೂ ಓದಿ: ಸರ್ವಾಧಿಕಾರಿ ಪುಟಿನ್ ಮತ್ತವರ ಜೀವಭಯ: ಮಾಜಿ ರಕ್ಷಣಾ ಅಧಿಕಾರಿಗಳು ಬಯಲಿಗೆಳೆದ ರಹಸ್ಯಗಳು

ಅವರು 1989ರಲ್ಲಿ ನೌಕಾಪಡೆಯ ವಿಮಾನ ಚಾಲಕಿಯಾಗಿ ಸೇರ್ಪಡೆಗೊಂಡು, ವಿವಿಧ ಚಕಮಕಿ ಹಾಗೂ ಪರಿಹಾರ ಕಾರ್ಯಾಚರಣೆಗಳಲ್ಲಿ ಹೆಲಿಕಾಪ್ಟರ್‌ಗಳು, ವಿಮಾನಗಳನ್ನು ಚಲಾಯಿಸಿದರು. ಅವರು ಓರ್ವ ಟೆಸ್ಟ್ ಪೈಲಟ್ ಬೋಧಕಿಯಾಗಿ, 2,700 ಗಂಟೆಗಳಿಗೂ ಹೆಚ್ಚು ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಅವರನ್ನು ನಾಸಾ 1998ರಲ್ಲಿ ಗಗನಯಾತ್ರೆಯ ಯೋಜನೆಗೆ ಆಯ್ಕೆ ಮಾಡಿತು. ಅವರಿಗೆ ರೋಬೋಟಿಕ್ಸ್ ಹಾಗೂ ಇತರ ಐಎಸ್ಎಸ್ ಚಟುವಟಿಕೆಗಳು, ತಂತ್ರಜ್ಞಾನಗಳ ಕುರಿತು ಮಾಸ್ಕೋದಲ್ಲಿ ರಷ್ಯಾದ ಮಾಸ್ಕೋದಲ್ಲಿ ಸರ್ಕಾರಿ ಸ್ವಾಮ್ಯದ ಬಾಹ್ಯಾಕಾಶ ಸಂಸ್ಥೆ ರಾಸ್‌ಕಾಸ್ಮೋಸ್ ಮೂಲಕ ತರಬೇತಿ ನೀಡಲಾಯಿತು.

ಸುನೀತಾ ವಿಲಿಯಮ್ಸ್ ಮೊತ್ತಮೊದಲ ಬಾರಿಗೆ ಡಿಸೆಂಬರ್ 9, 2006ರಂದು ಡಿಸ್ಕವರಿ ಸ್ಪೇಸ್ ಶಟಲ್ ಮೂಲಕ, ಎಸ್‌ಟಿಎಸ್-116 ಯೋಜನೆಯ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಅವರು 14 ಹಾಗೂ 15 ಯೋಜನೆಗಳ ಅಂಗವಾಗಿ ಅಲ್ಲಿ ಉಳಿದುಕೊಂಡು, ನಾಲ್ಕು ಬಾಹ್ಯಾಕಾಶ ನಡಿಗೆಯನ್ನು ಪೂರೈಸಿದರು. ಅವರು ಬಾಹ್ಯಾಕಾಶ ನೌಕೆಯ ಹೊರಗಡೆ 29 ಗಂಟೆಗಳನ್ನು ಕಳೆದಿದ್ದರು. ಅವರು ಬಾಹ್ಯಾಕಾಶ ನಿಲ್ದಾಣದ ಟ್ರೆಡ್‌ಮಿಲ್‌ನಲ್ಲಿ ಬೋಸ್ಟನ್ ಮ್ಯಾರಥಾನ್ ಸಹ ಓಡಿದ್ದರು! ಅವರು ಅತ್ಯಧಿಕ ಬಾಹ್ಯಾಕಾಶ ನಡಿಗೆ ಪೂರೈಸಿದ ಮಹಿಳೆ (ಏಳು) ಹಾಗೂ ಅತಿಹೆಚ್ಚು ಸಮಯ ಬಾಹ್ಯಾಕಾಶ ನಡಿಗೆ ಕೈಗೊಂಡ ಮಹಿಳೆ (50 ಗಂಟೆ, 40 ನಿಮಿಷ) ಎಂಬ ಸಾಧನೆ ನಿರ್ಮಿಸಿದರು. ಅವರು ಜೂನ್ 22, 2007ರಂದು ಎಸ್‌ಟಿಎಸ್-117 ಸಿಬ್ಬಂದಿಯೊಡನೆ ಭೂಮಿಗೆ ಮರಳಿದರು.

ಇದನ್ನೂ ಓದಿ: ರಷ್ಯಾದ ವ್ಯಾಗ್ನರ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಯುಕೆ

ಸುನೀತಾ ವಿಲಿಯಮ್ಸ್ ಎರಡನೆಯ ಬಾರಿಗೆ ಜುಲೈ 15, 2012ರಂದು ಸೊಯುಜ್ ಟಿಎಂಎ-05ಎಂ ಬಾಹ್ಯಾಕಾಶ ನೌಕೆಯಲ್ಲಿ ಎಕ್ಸ್‌ಪೆಡಿಷನ್ 32ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಅವರು ಸೆಪ್ಟೆಂಬರ್ 16, 2012ರಂದು ಎಕ್ಸ್‌ಪೆಡಿಷನ್ 33ರ ಕಮಾಂಡರ್ ಆಗಿ ನೇಮಕಗೊಂಡರು. ಅವರು ಈ ಅವಧಿಯಲ್ಲಿ ಮೂರು ಬಾಹ್ಯಾಕಾಶ ನಡಿಗೆಗಳನ್ನು ಕೈಗೊಂಡರು. ಅವರು ಬಾಹ್ಯಾಕಾಶ ನಿಲ್ದಾಣದ ಉಪಕರಣಗಳನ್ನು ಬಳಸಿ, ಲಂಡನ್ ಒಲಿಂಪಿಕ್ಸ್‌ನ ಓಟ, ಈಜು ಮತ್ತು ಸೈಕ್ಲಿಂಗ್‌ನ ಟ್ರಯಾಥ್ಲಾನ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅವರು ಈ ಎರಡು ಯೋಜನೆಗಳಲ್ಲಿ ಒಟ್ಟಾರೆ 322 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದರು. ಅವರು ಬಾಹ್ಯಾಕಾಶದಲ್ಲಿ ಅತಿಹೆಚ್ಚು ಸಮಯ ಕಳೆದ ಆರನೇ ಅಮೆರಿಕನ್ ಎನಿಸಿಕೊಂಡು, ಮಹಿಳೆಯರ ಪೈಕಿ ಎರಡನೆಯವರೆನಿಸಿಕೊಂಡರು. ಅವರು ನವೆಂಬರ್ 19, 2012ರಂದು ಭೂಮಿಗೆ ಮರಳಿದರು.

ನಾಸಾ ಮತ್ತು ಬೋಯಿಂಗ್ ಸಂಸ್ಥೆಗಳ ಇತ್ತೀಚಿನ ವರದಿಗಳ ಪ್ರಕಾರ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಕಾರ್ಯಾಚರಣೆಯ ಅಂಗವಾಗಿ ಸುನೀತಾ ವಿಲಿಯಮ್ಸ್ ಅವರು ಮತ್ತಿಬ್ಬರು ಗಗನಯಾತ್ರಿಗಳು ಮಾರ್ಚ್ 2024ರಲ್ಲಿ ತೆರಳುವ ನಿರೀಕ್ಷೆಗಳಿವೆ. ಆದರೆ, ಈ ಯೋಜನೆಯ ಖಚಿತ ದಿನಾಂಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಯುನೈಟೆಡ್ ಲಾಂಚ್ ಅಲಯನ್ಸ್ ಹಾಗೂ ಈಸ್ಟರ್ನ್ ರೇಂಜ್ ಲಭ್ಯತೆಯ ಮೇಲೆ ಅವಲಂಬಿತವಾಗಿದೆ.

ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದ ಅದ್ಭುತಗಳನ್ನು ಅನ್ವೇಷಿಸುವ ಬಯಕೆ ಹೊಂದಿರುವ ಅಸಂಖ್ಯಾತ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅವರು ಗಗನಯಾತ್ರಿ ಮತ್ತು ನೌಕಾಪಡೆಯ ಅಧಿಕಾರಿಯಾಗಿ ತನ್ನ ವೃತ್ತಿಜೀವನದಲ್ಲಿ ಅಸಾಧಾರಣ ಧೈರ್ಯ, ಸಮರ್ಪಣಾ ಭಾವ, ಹಾಗೂ ಪ್ರಾವೀಣ್ಯತೆಯನ್ನು ತೋರಿದ್ದಾರೆ. ಅವರು ತನ್ನ ಸಾಂಸ್ಕೃತಿಕ ಬೇರುಗಳನ್ನು ಮರೆಯದೆ, ಅವುಗಳನ್ನು ತನ್ನ ಸಹೋದ್ಯೋಗಿಗಳು, ಸಹಯಾತ್ರಿಗಳು ಮತ್ತು ಸಾರ್ವಜನಿಕರಿಗೆ ಪ್ರದರ್ಶಿಸಿದ್ದಾರೆ. ಅವರು ನಕ್ಷತ್ರಗಳನ್ನು ಸ್ಪರ್ಶಿಸುವ ಗುರಿ ಹೊಂದಿರುವ, ಎಸ್‌ಟಿಇಎಂ ಕ್ಷೇತ್ರಗಳಲ್ಲಿ ಸಾಧನೆ ಮೆರೆಯಲು ಬಯಸುವ ಎಲ್ಲ ಮಹಿಳೆಯರಿಗೂ ಆದರ್ಶವಾಗಿದ್ದಾರೆ.

ಇದನ್ನೂ ಓದಿ: ಚೀನಾವನ್ನು ಒಳಗೊಳ್ಳಲು ಬಯಸುವುದಿಲ್ಲ ಎಂದ ಯುಎಸ್ ಅಧ್ಯಕ್ಷ ಜೊ ಬಿಡೆನ್ 

ಎಸ್‌ಟಿಇಎಂ ಎನ್ನುವುದು ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ. ಎಸ್‌ಟಿಇಎಂ ಕ್ಷೇತ್ರಗಳು ವೈವಿಧ್ಯಮಯ ವಿಷಯಗಳು ಮತ್ತು ಉದ್ಯೋಗಾವಕಾಶಗಳನ್ನು ಹೊಂದಿದ್ದು, ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಹಾಗೂ ಗಣಿತಶಾಸ್ತ್ರಕ್ಕೆ ಗಮನ ಹರಿಸುತ್ತದೆ. ಇದು ಭೌತಶಾಸ್ತ್ರ, ಗಣಕ ವಿಜ್ಞಾನ, ಜೀವಶಾಸ್ತ್ರ, ಹಾಗೂ ಇಂಜಿನಿಯರಿಂಗ್‌ಗಳನ್ನು ಒಳಗೊಂಡಿದೆ.

ಸುನೀತಾ ವಿಲಿಯಮ್ಸ್ ಅವರು ಮೈಕೇಲ್ ಜೆ ವಿಲಿಯಮ್ಸ್ ಎಂಬ ಫೆಡರಲ್ ಪೊಲೀಸ್ ಅಧಿಕಾರಿಯನ್ನು ವಿವಾಹವಾಗಿದ್ದಾರೆ. ಅವರು ಓಟ, ಈಜು, ಬೈಕ್ ಸವಾರಿ, ಸ್ನೋಬೋರ್ಡಿಂಗ್, ಹಾಗೂ ಹೈಕಿಂಗ್ ಪ್ರಿಯರಾಗಿದ್ದಾರೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News